ರಮಾಬಾಯಿ, ಪಂಡಿತ
1858-1922. ಪ್ರಸಿದ್ಧ ಸಮಾಜ ಸುಧಾರಕಿ. ದಕ್ಷಿಣ ಕನ್ನಡ ಜಿಲ್ಲೆಯ ಒಂದು ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ಇವರು ಅನಂತ ಪದ್ಮನಾಭ ಡೋಂಗ್ರೆ ಮತ್ತು ಲಕ್ಷ್ಮೀಬಾಯಿ ದಂಪತಿಗಳ ಮೂವರು ಮಕ್ಕಳಲ್ಲಿ ಕಿರಿಯರು. ಪ್ರಚಂಡ ಬುದ್ದಿ, ಅಪಾರ ಪಾಂಡಿತ್ಯ ಪಡೆದಿದ್ದ ಇವರು ಬಂಗಾಲಿ ವ್ಯಕ್ತಿಯೊಬ್ಬರನ್ನು ಮದುವೆಯಾಗಿ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದರು. ಸಂಪ್ರದಾಯ ಶರಣರು ಈಕೆಗೆ ಪಾಂಡಿತ್ಯ ಮತ್ತು ವಾಗ್ವೈಖರಿಯನ್ನು ಮೆಚ್ಚಿ ಪ್ರಶಂಸಿಸಿದರೂ ಈಕೆಯ ಅಂತರರ್ಜಾತೀಯ ವಿವಾಹವನ್ನೂ ಹಿಂದೂ ಧರ್ಮವನ್ನು ಟೀಕಿಸುತ್ತಿದ್ದ ಈಕೆಯ ರೀತಿಯನ್ನೂ ಕಂಡು ಕೆರಳಿದರು. ಪುರುಷ ವರ್ಗವು ಮಹಿಳೆಯರನ್ನು ಶೋಷಿಸುತ್ತಿದ್ದ ರೀತಿ ಮತ್ತು ಅನಾದರದ ಮನೋಭಾವಗಳಿಂದ ನೊಂದ ರಮಾಬಾಯಿ ಕ್ರೈಸ್ತಧರ್ಮ ಸ್ವೀಕರಿಸಿದರು. ಮೂರು ವರ್ಷಗಳ ಕಾಲ (1884-86) ಚೆಲ್ವನ್‍ಹ್ಯಾಮ್ (ಇಂಗ್ಲೆಂಡ್) ಕ್ರಿಶ್ಚಿಯನ್ ಮಹಿಳಾ ಕಾಲೇಜಿನಲ್ಲಿ ಸಂಸ್ಕøತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಅಮೆರಿಕದಲ್ಲಿ ಕಿಂಡರ್‍ಗಾರ್ಟನ್‍ನ ಫ್ರಾಯಬೆಲ್ಸ್ ಸಿಸ್ಟಮ್‍ನ್ನು ಕಲಿತರು. ಅನಂತರ ಶಿಕ್ಷಣಕಾರ್ಯಕ್ಕೆ ಅಪಾರವಾದ ಆರ್ಥಿಕ ನೆರವಿನ ಭರವಸೆ ಪಡೆದು ಇವರು ಭಾರತಕ್ಕೆ ಮರಳಿದರು.

ಮಹಿಳೆಯರ ಕಲ್ಯಾಣಕ್ಕಾಗಿ ಇವರು ವಿಧವೆಯರು, ಪತಿತೆಯರು ಹಾಗೂ ರೋಗಿಷ್ಠ ಸ್ತ್ರೀಯರ ನೆರವಿಗಾಗಿ ಅಸಂಖ್ಯಾತ ಸಂಘಸಂಸ್ಥೆಗಳನ್ನು ತೆರೆದರು. ಪುಣೆಯಲ್ಲಿ ವಿಧವೆಯರ ಉದ್ದಾರಕ್ಕಾಗಿ ಆರ್ಯ ಮಹಿಳಾ ಸಮಾಜವನ್ನು ಆರಂಭಿಸಿ ಸಂಸ್ಕøತವನ್ನು ಕಲಿಸಿದರು. ಸುಮಾರು 2000 ವಿಧ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದರು. ವಿದ್ವಾಂಸರಾದ ಡಿ.ಡಿ. ಕರ್ವೆ ಅವರು ಪುಣೆಯಲ್ಲಿ ಹಿಂದೂ ವಿಧವೆಯರಿಗಾಗಿ 1889ರಲ್ಲಿ ಸ್ಥಾಪಿಸಿದ್ದ ಶಾರದಾ ಸದನದಲ್ಲಿ ಅವರ ಶಿಷ್ಯೆಯಾಗಿ ರಮಾಬಾಯಿ ನಿಸ್ಪøಹ ಸೇವೆ ಸಲ್ಲಿಸಿದರು. ಇದರ ಪರಿಣಾಮವಾಗಿ ಈ ಶಾರದಾ ಸದನ 1916ರಲ್ಲಿ `ಇಂಡಿಯಾ ವಿಮೆನ್ಸ್ ಯೂನಿವರ್ಸಿಟಿ' ಯಾಗಿ (ಭಾತರದ ಮಹಿಳಾ ವಿಶ್ವವಿದ್ಯಾನಿಲಯ) ಪರಿವರ್ತಿತವಾಯಿತು. ಈ ಸಂಸ್ಥೆಯಲ್ಲಿ ಸ್ತ್ರೀಯರಿಗೆ ಉಪಯುಕ್ತವಾದ ಗೃಹವಿಜ್ಞಾನ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿತು. ಇದರಿಂದಾಗಿ ಬ್ರಾಹ್ಮಣ ಸಮಾಜದ ಎಷ್ಟೋ ವಿಧವೆಯರು ಮತ್ತು ಸಾಮಾನ್ಯವಾಗಿ ಸ್ತ್ರೀ ಸಮೂಹ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಯಿತು.

ಪುಣೆಯಲ್ಲಿ ಇವರು ಸ್ಥಾಪಿಸಿದ್ದ ಆರ್ಯ ಮಹಿಳಾ ಸಮಾಜದಿಂದ ಹೆಚ್ಚಿನ ಯಶಸ್ಸು ದೊರೆಯಲಿಲ್ಲ. ರಾನಡೆ ಮತ್ತು ಆರ್.ಜಿ. ಭಂಡಾರಕರ್ ಅವರು ರಮಾಬಾಯಿಯವರಿಗೆ ಮೊದಮೊದಲು ಸಹಾನುಭೂತಿ ತೋರಿಸಿದರು. ಮಹಿಳೆಯರಿಗೆ ಶಿಕ್ಷಣ ನೀಡುವ ನೆಪದಲ್ಲಿ ಮತಾಂತರಕಾರ್ಯದಲ್ಲಿ ರಮಾಬಾಯಿ ತೊಡಗಿದ್ದಾರೆ ಎಂದು ಟಿಕಳ್ ಆಪಾದಿಸಿದರು. ಶಾರದಾ ಸದನವು ನಡೆಸುತ್ತಿದ್ದ ಮತಾಂತರ ಕಾರ್ಯವನ್ನು ಇವರು ಬಹಿರಂಗವಾಗಿ ಒಪ್ಪಿಕೊಂಡರು. ಆಗ ಭಂಡಾರಕರ್ ಮತ್ತು ರಾನಡೆ ಅವರು ರಮಾಬಾಯಿಯವರ ಕಾರ್ಯಚಟುವಟಿಕೆಗಳೊಂದಿಗೆ ಇದ್ದ ಸಂಪರ್ಕವನ್ನು ಕಡಿದುಕೊಂಡರು. ರಮಾಬಾಯಿಯವರ ಪಾಂಡಿತ್ಯ ಪೂರ್ಣ ಸಾಧನೆಗಾಗಿ ಇವರಿಗೆ ಕಲ್ಕತ್ತೆಯಲ್ಲಿ ಸರ್ವಜನಿಕ ಮನ್ನಣೆಯಾಗಿ ಪಂಡಿತ ಮತ್ತು ಸರಸ್ವತಿ ಎಂಬ ಪ್ರಶಸ್ತಿಗಳನ್ನು ನೀಡಲಾಯಿತು.
ಇವರು ಅನೇಕ ಮರಾಠಿ ಗ್ರಂಥಗಳನ್ನು ರಚಿಸಿದ್ದಾರೆ. ದಿ ಹೈನ್ ಕ್ಯಾಸ್ಟ್ ಹಿಂದೂ ವಿಮೆನ್, ರಮಾಬಾಯಿ ಬೈಬಲ್ (ಮೂಲ ಹೀಬ್ರೂ ಭಾಷೆಯಿಂದ ಅನುವಾದ), ಎ ಟೆಸ್ಟಿಮೊನಿ (ಕ್ರೈಸ್ತಮತಕ್ಕೆ ಈಕೆ ಮತಾಂತರವಾದ ಕಥೆ) ಇವರ ಮುಖ್ಯ ಕೃತಿಗಳು. 
(ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ